ಟೆರೆಡೊ
ಎರಡು ಚಿಪ್ಪುಗಳಿಂದ ಕೂಡಿದ ಕಡಲ ಮೃದ್ವಂಗಿ. ಪಿಲಿಸಿಪೊಡ ಅಥವಾ ಲ್ಯಾಮೆಲಿಬ್ರ್ಯಾಂಕಿಯೇಟ ವರ್ಗ. ಯೂಲ್ಯಾಮೆಲಿಬ್ರಾಂಕಿಯೇಟ ಗಣ ಮತ್ತು ಟೆರೆಡಿನಿಡೀ ಕುಟುಂಬಕ್ಕೆ ಸೇರಿದೆ. ಇದು ಹಡಗಿನ ಮರ ಮುಟ್ಟುಗಳು, ಬಂದರುಕಟ್ಟೆಯ ಮರದ ದಿಮ್ಮಿ, ತೊಲೆ ಕಂಬ ಮೊದಲಾದುವುಗಳನ್ನು ಕೊರೆದು ಅದರೊಳಗೆ ವಾಸಿಸುತ್ತದೆ. ಹೀಗೆ ಕೊರೆಯಲ್ಪಟ್ಟ ಮರವನ್ನು ಬರಿಗೈಯಲ್ಲೇ ಪುಡಿಮಾಡಬಹುದು. ಗೆದ್ದಲು ಹುಳುಗಳಂತೆ ಮರವನ್ನು ತಿಂದು ನಾಶಮಾಡುವುದರಿಂದ ಇದನ್ನು ಕಡಲಗೆದ್ದಲು ಎಂದು ಕರೆಯುವುದೂ ಉಂಟು. ಮೆಡಿಟರೇನಿಯನ್ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರದ ಇಕ್ಕಡೆಗಳ ತೀರಪ್ರದೇಶದಲ್ಲಿ ಇದರ ಹಾವಳಿ ಹೆಚ್ಚು.

	ಇದರ ದೇಹ ಉದ್ದವಾದ ನಳಿಕೆಯಂತಿದ್ದು ಇದು ಹೊರನೋಟಕ್ಕೆ ಹುಳುವಿನನಂತೆ ಕಾಣುತ್ತದೆ. ದೇಹದ ಪಾಶ್ರ್ವಭಾಗ ಕ್ರಮವಾಗಿ ಚೂಪಾಗುತ್ತದೆ. ಈ ಮೃದ್ವಂಗಿಯ ನಿಜವಾದ ಚಿಪ್ಪುಗಳು ಕ್ಷೀಣವಾಗಿದ್ದು ದೇಹದ ಅಗ್ರಭಾಗದ ಬೆನ್ನು ಕಡೆಗೆ ಮಾತ್ರ ಕಾಣುತ್ತವೆ. ಪ್ರತಿ ಚಿಪ್ಪಿನ ಹೋಳು ಮೂರು ಪಾಲಿಗಳಿಂದ ಕೂಡಿದೆ. ಚಿಪ್ಪಿನ ಆಕಾರ ಅರ್ಧವೃತ್ತದಂತೆ. ಚಿಪ್ಪಿನ ತಳದ ಅಂಚು ಮತ್ತು ಹೊರಮೈ ಗರಗಸದ ಹಲ್ಲುಗಳಂತಿವೆ. ಟೆರೆಡೊ ಈ ಚಿಪ್ಪುಗಳ ಸಹಾಯದಿಂದ ಮರವನ್ನು ಕೊರೆಯುತ್ತದೆ. ಪಾಶ್ರ್ವ ಅಭಿವರ್ತಿನಿ ಸ್ನಾಯು ಹೆಚ್ಚು ಬಲಯುತವಾಗಿದ್ದು ಕೊರೆಯುವುದಕ್ಕೆ ಬೇಕಾಗುವ ಶಕ್ತಿಯನ್ನು ಒದಗಿಸುವುದು. ಹೀಗೆ ಕೊರೆದ ಬಿಲಗಳು ಸುರಂಗದಂತಿರುವುವು. ಇವುಗಳ ಉದ್ದ ಸುಮಾರು 25 ಸೆಂ.ಮೀ. ವ್ಯಾಸ 6 ಸೆಂ. ಮೀ. ಒಂದೇ ಮರದ ದಿಮ್ಮಿಯನ್ನು ಅನೇಕ ಟೆರಡೊಗಳು ಕೊರೆದಿರುವುದುಂಟು. ಹೀಗೆ ಕೊರೆದ ಸುರಂಗಗಳು ಪರಸ್ಪರ ಎಷ್ಟು ಹತ್ತಿರವಿರುತ್ತವೆ ಎಂದರೆ ಅವುಗಳ ನಡುವಣ ಗೋಡೆ ಕಾಗದದಷ್ಟು ತೆಳುವಾಗಿರುತ್ತದೆ. ಆದರೂ ಒಂದು ಸುರಂಗ ಮತ್ತೊಂದನ್ನು ಅಡ್ಡಹಾಯುವುದಿಲ್ಲ. ಬಹುಶಃ ಮರವನ್ನು ಕೊರೆಯುತ್ತಿರುವಾಗ ಪಕ್ಕದಲ್ಲಿನ ಇತರ ಟೆರೆಡೊಗಳ ಇರವನ್ನು ತಮ್ಮ ಶ್ರವಣೇಂದ್ರಿಯಗಳಿಂದ ಗುರುತಿಸಿ ಪರಸ್ಪರ ಅಡ್ಡಿಯಾಗದಂತೆ ಕೊರೆಯಬಹುದೆಂದು ಕಾಣುತ್ತದೆ. ದೇಹದ ತಳಭಾಗದಲ್ಲಿ ಮ್ಯಾಂಟಲ್ ನಳಿಕೆಯಲ್ಲಿ ಕ್ಷೀಣವಾದ ಸ್ನಾಯುಮಯ ಪಾದ ಇದೆ. ಚಿಪ್ಪಿನ ಹೋಳುಗಳು ಚಿಕ್ಕವಾಗಿರುವುದರಿಂದ ಇವು ಪಾದವನ್ನು ಸಂಪೂರ್ಣವಾಗಿ ಆವರಿಸಲಾರವು. ಮ್ಯಾಂಟಲ್ ಪಾಲಿಗಳ ಅಂಚು ಪರಸ್ಪರ ಕೂಡಿಕೊಂಡು ನಳಿಕೆಯಂತೆ ಮಾರ್ಪಟಾಗಿದ್ದು ದೇಹದ ಸುತ್ತ ಸುಣ್ಣದ ನಳಿಕೆಯನ್ನು ರಚಿಸುತ್ತವೆ. ದೇಹದ ಕೊನೆಯ ಭಾಗದಲ್ಲಿ ಎರಡು ಪ್ರತ್ತ್ಯೇಕ ಜಲನಾಲೆಗಳಿವೆ. ಇವು ಸೂಕ್ಷವಾದ ರಂಧ್ರಗಳ ಮೂಲಕ ಹೊರ ತೆರೆಯುವುವು. ಒಂದು ರಂಧ್ರದ ಮುಖಾಂತರ ಉಸಿರಾಟಕ್ಕೆ ನೆರವಾಗುವ ಹಾಗೂ ಆಹಾರ ಜೀವಿಗಳಿಂದ ಕೂಡಿರುವ ನೀರಿನ ಪ್ರವಾಹ ಮ್ಯಾಂಟಲ್ ಕುಹರವನ್ನು ಸೇರುತ್ತದೆ. ಇನ್ನೊಂದು ರಂಧ್ರದ ಮೂಲಕ ತ್ಯಾಜ್ಯವಸ್ತುಗಳಿಂದ ಕೂಡಿದ ನೀರಿನ ಪ್ರವಾಹ ದೇಹದಿಂದ ಹೊರಬರುತ್ತದೆ. ನೀರಿನ ಪ್ರವಾಹಕ್ಕೆ ಶಿಲಕೆಗಳ ಬಡಿತವೇ ಕಾರಣ. ಈ ಜಲನಾಲೆಗಳು ಸಂಧಿಸುವ ಸ್ಥಳದಲ್ಲಿ ಅಂದರೆ ಸುರಂಗದ ಬಾಯ ಬಳಿ ಹುಟ್ಟಿನ ಆಕಾರದ ಮತ್ತು ಸುಣ್ಣದಿಂದ ಕೂಡಿದ ಎರಡು ಹಲಗೆಗಳು (ಪ್ಯಾಲೇಟ್) ಇವೆ. ಟೆರೆಡೊ ಅಪಾಯಕ್ಕೆ ಒಳಗಾದಾಗ ತನ್ನ ಜಲನಾಲೆಗಳನ್ನು ದೇಹದ ಒಳಕ್ಕೆ ಎಳೆದುಕೊಂಡು ಸುರಂಗದ ಬಾಯಿಯನ್ನು ಪ್ಯಾಲೆಟ್ಟುಗಳ ಸಹಾಯದಿಂದ ಕವಾಟಗಳಂತೆ ಮುಚ್ಚಿಕೊಂಡುಬಿಡುತ್ತದೆ.

	ಟೆರೆಡೊ ಬಿಲ ಕೊರೆಯುವಾಗ ಮರ ಪುಡಿಪುಡಿಯಾಗುತ್ತದೆ. ಮರದ ಈ ಹೊಟ್ಟನ್ನು ಇದು ನುಂಗಿ ತನ್ನ ಜಠರ ಭಾಗದಿಂದ ಹೊರಚಾಚುವ ಒಂದು ದೊಡ್ಡ ಅಂಧನಾಳದಲ್ಲಿ ಸಂಗ್ರಹಿಸುತ್ತದೆ. ಜಠರದಲ್ಲಿ ಉತ್ಪತ್ತಿಯಾಗುವ ಕೆಲವು ಕಿಣ್ವಗಳು ಮರದಲ್ಲಿರುವ ಸೆಲ್ಯುಲೋಸ್ ಮತ್ತು ಹೆಮಿಸೆಲ್ಯುಲೋಸ್‍ಗಳನ್ನು ಜೀರ್ಣ ಮಾಡುತ್ತವೆ.

	ಟೆರೆಡೊ ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗುವುದು. ಸಂತಾನೋತ್ಪತ್ತಿಯ ರೀತಿ ಒಂದೊಂದು ಪ್ರಭೇದದಲ್ಲಿ ಒಂದೊಂದು ತರಹ. ಕೆಲವು  ಪ್ರಭೇದಗಳಲ್ಲಿ ಅಂಡಾಣು ಮತ್ತು ರೇತ್ರಾಣುಗಳು ದೇಹದಿಂದ ಹೊರಬಂದು ಸಮುದ್ರದ ನೀರಿನಲ್ಲಿ ಕೂಡುತ್ತವೆ. ಕೆಲವಲ್ಲಿ ಹೆಣ್ಣಿನ ದೇಹದ ಒಳಗೆ ಅಂಡಾಣುಗಳ ನಿಷೇಚನೆ ನಡೆಯುವುದು. ಇನ್ನು ಕೆಲವು ಪ್ರಭೇದಗಳು ಕಿವಿರನ್ನೇ ಕಾವುಗೂಡಾಗಿ (ಬ್ರೂಡ್ ಚೇಂಬರ್) ಬಳಸಿಕೊಳ್ಳುತ್ತವೆ. ನಿಷೇಚನೆಯ ರೀತಿ ಯಾವುದೇ ತೆರನಾಗಿರಲಿ ನಿಷೇಚಿತ ಅಂಡ ಮೊದಲು ಡಿಂಬವಾಗಿ ರೂಪಗೊಳ್ಳುತ್ತದೆ ಇದು ತನ್ನ ಶಿಲಕೆಗಳ ಸಹಾಯದಿಂದ ನೀರಿನಲ್ಲಿ ಈಜುತ್ತ ಇರುವುದು. ಅನಂತರ ಎರಡು ಚಿಪ್ಪು ಹೋಳುಗಳನ್ನು ರೂಪಿಸಿಕೊಂಡು ಮರದ ಮೇಲೆ ತಂಗುತ್ತದೆ. ಇಂಥ ಸ್ಥಿತಿಯಲ್ಲಿ ಇದರ ಚಿಪ್ಪಿನ ಹೋಳುಗಳು ಇಡೀ ದೇಹವನ್ನು ಮುಚ್ಚುವಂತಿರುತ್ತವೆ. ದೇಹದ ತಳಭಾಗದಿಂದ ಹೊರಚಾಚಿರುವ ಸ್ನಾಯುಮಯ ಪಾದ, ಕಣ್ಣು ಮತ್ತು ಶ್ರವಣೇಂದ್ರಿಯಗಳಿರುತ್ತವೆ. ಮರದ ಮೇಲೆ ಕುಳಿತ ಮೇಲೆ ಕಣ್ಣು ಮಾಯವಾಗುತ್ತದೆ. ಮರದ ಆಸರೆ ಸಿಕ್ಕದಿದ್ದರೆ ಹುಳು ಸಾಯುತ್ತದೆ. ಬಿಲ ತೋಡಿದಂತೆಲ್ಲ ಇದರ ದೇಹ ಬೆಳೆಯುತ್ತ ಹೋಗುವುದು.

	ಇದು ಮರದ ತೊಲೆಗಳನ್ನು ಕೊರೆದು ಹಾಳುಮಾಡುವುದರಿಂದ ಇದರ ಹಾವಳಿಯನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಡಗಿನ ಮರಮುಟ್ಟುಗಳಿಗೆ ತಾಮ್ರದ ರೇಕು ಹಾಕುವುದು, ಕಬ್ಬಿಣದ ತುಕ್ಕು ಇವುಗಳ ಹಾವಳಿಯನ್ನು ತಡೆಗಟ್ಟುವದರಿಂದ ಅಗಲ ತಲೆಯ ಕಬ್ಬಿಣದ ಮೊಳೆಗಳನ್ನು ಮರಗಳಿಗೆ ದಟ್ಟವಾಗಿ ಬಡಿಯುವುದು ಈ ಕ್ರಮಗಳಲ್ಲಿ ಕೆಲವು. ಲೋಹದಿಂದ ಹಡಗುಗಳನ್ನು ನಿರ್ಮಿಸುವುದು ಪ್ರಾರಂಭವಾದ ಮೇಲೆ ಹಡಗುಗಳಿಗೆ ಇವುಗಳ ಹಾವಳಿ ತಪ್ಪಿದರೂ ಬಂದರುಕಟ್ಟೆಯ ಮರದಿಮ್ಮಿಗಳಿಗೆ ಇವುಗಳ ಉಪದ್ರವ ಹಾಗೆಯೇ ಉಳಿದಿದೆ. ಕ್ರಯೊಸೋಟ್ ಎಂಬ ರಾಸಾಯನಿಕ ವಸ್ತುವಿನ ಲೇಪದಿಂದ ಮರದ ತೊಲೆ ಮತ್ತು ದಿಮ್ಮಿಗಳನ್ನು ಟೆರೆಡೊಗಳ ಹಾವಳಿಯಿಂದ ಸಂರಕ್ಷಿಸಬಹುದೆಂದು ಗೊತ್ತಾಗಿದೆ.
(ಜೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ